ಕ್ಯಾಲ್ಗುರ್ಲಿ
ಪಶ್ಚಿಮ ಆಸ್ಟ್ರೇಲಿಯದ ಒಂದು ಪಟ್ಟಣ. ಕ್ಯಾಲ್ಗುರ್ಲಿ ಜಿಲ್ಲೆಯ ಮಧ್ಯದಲ್ಲಿದೆ. ಪರ್ತ್‍ಗೆ 604 ಕಿ.ಮೀ ಮತ್ತು ಕೂಲ್ಗಾರ್ಡಿಗೆ 38 ಕಿ.ಮೀ. ದೂರದಲ್ಲಿದೆ. ನಗರ ಪ್ರದೇಶದ ಜನಸಂಖ್ಯೆ 21,773 (1961).

ಈ ಪ್ರದೇಶದಲ್ಲಿ 1887-88ರಲ್ಲಿ ಚಿನ್ನ ಪತ್ತೆಯಾಯಿತು. 1892-94ರಲ್ಲಿ ಚಿನ್ನದ ಆಸೆಯಿಂದ ಜನ ಇಲ್ಲಿಗೆ ಧಾವಿಸಿದರು. 1900ರ ವೇಳೆಗೆ ಇಲ್ಲಿಯ ಜನಸಂಖ್ಯೆ 30,000ಕ್ಕೆ ಏರಿತು. ಅಲ್ಲಿಂದೀಚೆಗೆ ಇದರ ಜನಸಂಖ್ಯೆ ಗಣಿ ಉದ್ಯಮದ ಏರಿಳಿತಗಳಿಗೆ ಅನುಗುಣವಾಗಿ ವ್ಯತ್ಯಾಸಗೊಂಡಿದೆ. ಸರಾಸರಿಯಲ್ಲಿ ಇಲ್ಲಿಯ ಜನಸಂಖ್ಯೆ ಸು.25,000ರಲ್ಲಿ ಮುಂದುವರಿದಿದೆ. ಇಲ್ಲಿಯದು ಒಣವಾಯುಗುಣ. ವಾರ್ಷಿಕ ಸರಾಸರಿ ಮಳೆ 10" ಗೂ ಕಡಿಮೆ. ನೀರಿನ ಅಭಾವದ್ದು ಒಂದು ದೊಡ್ಡ ತೊಂದರೆ. ಪರ್ತ್‍ಗೆ 24 ಕಿ.ಮೀ. ಪೂರ್ವದಲ್ಲಿ ಹೆಲೆನ ನದಿಯ ಮೇಲಿರುವ ಮುಂಡರಿಂಗ್ ಅಣೆಕಟ್ಟಿಯಿಂದ ಇಲ್ಲಿಗೆ ನೀರು ಸರಬರಾಯಿ ಮಾಡಲಾಗುತ್ತದೆ. ಕ್ಯಾಲ್ಗುರ್ಲಿಯಲ್ಲಿ ಗಣ ಉದ್ಯಮದ ಆರಂಭಕಾಲದಲ್ಲಿ ಚಿನ್ನದ ಉತ್ಪಾದನೆಯ ಗಾತ್ರ ತೀವ್ರವಾಗಿ ಮೇಲೇರಿತು. 1903 ರಿಂದ ಅದು ಇಳಿಮುಖವಾಯಿತು. 1920-29ರಲ್ಲಿ ತುಂಬ ಕ್ಷೀಣಿಸಿತ್ತು. ಅಲ್ಲಿಂದೀಚೆಗೆ ಚಿನ್ನದ ಬೆಲೆ ಏರಿರುವುದರಿಂದಲೂ ಆಧುನಿಕ ಗಣಿಗಾರಿಕೆ ವಿಧಾನಗಳ ಅನುಷ್ಠಾನದಿಂದಲೂ ಉದ್ಯಮ ಸ್ಥಾಯಿಕೃತವಾಗಿದೆ. ಇಲ್ಲೊಂದು ಜಿಲ್ಲಾ ಆಸ್ಪತ್ರೆಯೂ ಗಣಿ ಶಾಲೆಯೂ ಇವೆ.			 (ಎಂ. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ